ಗ್ಲಿರಿಸಿಡಿಯ - 
ಲೆಗ್ಯುಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಸಸ್ಯಜಾತಿ.  ಇದನ್ನು ಅಲಂಕಾರಕ್ಕಾಗಿ, ನೆರಳಿಗಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಹಸಿರುಗೊಬ್ಬರಕ್ಕಾಗಿ ಉಷ್ಣವಲಯ ದೇಶಗಳಲ್ಲೆಲ್ಲ ಬೆಳೆಸಲಾಗುತ್ತದೆ.  ಅಮೆರಿಕದ ಉಷ್ಣಪ್ರದೇಶಗಳ ಮೂಲವಾಸಿ. ಇದರಲ್ಲಿ 10 ಪ್ರಭೇದಗಳಿವೆ.  ಭಾರತದಲ್ಲಿ ಮ್ಯಾಕ್ಯುಲೇಟ ಅಥವಾ ಸೀಪಿಯಮ್ ಎಂಬ ಪ್ರಭೇದವನ್ನು ಬೆಳೆಸುತ್ತಾರೆ.  

ಇದು ಸುಮಾರು 10 ಮೀ. ಎತ್ತರಕ್ಕೆ ಬೆಳೆಯುವ ಮರ.  ಮೋಟಾದ ಮುಖ್ಯ ಕಾಂಡವನ್ನು ಒಳಗೊಂಡಿದ್ದು ವಿಪುಲವಾಗಿ ಕವಲೊಡೆದಿರುತ್ತದೆ.  ಎಲೆಗಳು ದೊಡ್ಡವು; ಗರಿರೂಪದ ಸಂಯುಕ್ತಮಾದರಿಯವು.  ಅವುಗಳ ಜೋಡಣೆ ಪರ್ಯಾಯ ಮಾದರಿಯದು.  ಒಂದೊಂದು ಎಲೆಯಲ್ಲೂ 7 - 15 ಕಿರಿ ಎಲೆಗಳಿವೆ.  ಹೂಗಳು ಬಿಳಿ ಇಲ್ಲವೆ ನಸುಗೆಂಪು ಬಣ್ಣದವು; ರೇಸಿóೀಮ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.  ಅವು ಅರಳುವಾಗ ಮರದಲ್ಲಿ ಎಲೆಗಳೇ ಇಲ್ಲದಿರುವುದು ಈ ಗಿಡದ ಒಂದು ವಿಶೇಷ ಲಕ್ಷಣ.  ಕಾಯಿಗಳು ಪಾಡ್ ಮಾದರಿಯವು.  ಒಂದೊಂದರಲ್ಲೂ 10 - 15 ಬೀಜಗಳಿವೆ.  

ಗ್ಲಿರಿಸಿಡಿಯವನ್ನು ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ವಿಸ್ತಾರವಾಗಿ ಬೆಳೆಸಲಾಗುತ್ತದೆ.  ತುಂಬ ಒಳ್ಳೆಯ ಹಸಿರೆಲೆ ಗೊಬ್ಬರವೆಂದು ಹೆಸರಾಗಿರುವ ಇದನ್ನು ತೋಟಗಳ ಬೇಲಿಗಳಲ್ಲಿ, ಕಾಲುವೆಗಳ ಇಕ್ಕೆಡೆಗಳಲ್ಲಿ ಬತ್ತದ ಗದ್ದೆಗಳ ತೆವರಿನಲ್ಲಿ ಬೆಳೆಸಬಹುದು.  ಮಣ್ಣು ಯಾವ ಬಗೆಯದಾದರೂ ಇದು ಚೆನ್ನಾಗಿ, ಶೀಘ್ರಗತಿಯಲ್ಲಿ ಬೆಳೆಯುತ್ತದೆ.  ಇದನ್ನು ಬೀಜಗಳಿಂದ ಇಲ್ಲವೆ ಕಾಂಡ ತುಂಡುಗಳಿಂದ ವೃದ್ಧಿಸಬಹುದು.  ಬೀಜಗಳಿಗೆ ಕೀಟಗಳ ಉಪದ್ರವ ಹೆಚ್ಚಾಗಿರುವುದರಿಂದ ಕಾಂಡತುಂಡುಗಳಿಂದ ಬೆಳೆಸುವುದೇ ಉತ್ತಮ.  

ಚೆನ್ನಾಗಿ ಬಲಿತ ಕಾಂಡತುಂಡುಗಳನ್ನು ನೆಟ್ಟು ಅವುಗಳ ತುದಿಗೆ ಸಗಣಿ ಹಚ್ಚಬೇಕು.  ಕೆಲವು ದಿನಗಳ ಅನಂತರ ಅವು ಚಿಗುರಲು ಪ್ರಾರಂಭಿಸುತ್ತವೆ.  ಬೆಳೆಸಿದ ಅನಂತರ ಎರಡನೆಯ ವರ್ಷದಿಂದ ಸೊಪ್ಪನ್ನು ಕತ್ತರಿಸಲು ಆರಂಭಿಸಬಹುದು.  ವರ್ಷಕ್ಕೆ 2 - 4  ಸಲ ಸೊಪ್ಪನ್ನು ಕತ್ತರಿಸಬಹುದು.  ಪ್ರಾರಂಭದಲ್ಲಿ ಒಂದು ಮರದಿಂದ 10 -15 ಕೆ.ಜಿ. ಸೊಪ್ಪನ್ನು ಪಡೆಯಬಹುದಾದರೂ  5  ವರ್ಷ ವಯಸ್ಸಾದ ಮರಗಳಿಂದ 80 - 100 ಕೆ.ಜಿ. ಸೊಪ್ಪನ್ನು ಪಡೆಯಬಹುದು.  ಒಂದು ಮರದಿಂದ 20 ವರ್ಷಗಳ ವರೆಗೆ ಲಾಭದಾಯಕ ಮೊತ್ತದಲ್ಲಿ ಸೊಪ್ಪು ಕತ್ತರಿಸಬಹುದು.  ಗ್ಲಿರಿಸಿಡಿಯದ ಸೊಪ್ಪು ನೈಟ್ರೊಜನ್ನಿನ ಒಳ್ಳೆಯ ಆಕರ ಅನ್ನಿಸಿಕೊಂಡಿದೆ.  ಇದು ಬರಿಯ ಗೊಬ್ಬರವೊಂದೇ ಅಲ್ಲದೆ ದನಗಳಿಗೆ ಒಳ್ಳೆಯ ಮೇವೂ ಹೌದು.  ಗ್ಲಿರಿಸಿಡಿಯದ ಚೌಬೀನೆಯನ್ನು ಆಸರೆಗಂಬ ಬೇಲಿಗಂಬ ಮುಂತಾದವುಗಳಾಗಿಯೂ ಉರುವಲಾಗಿಯೂ ಬಳಸುವುದಿದೆ.  (ಬಿ.ಎ.ಸಿ)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ